Author: Rashmi Koti
ಭಾನುವಾರದ ಬೆಳಗ್ಗೆ 7.30 ರ ಸಮಯ. ಕುಕ್ಕರಹಳ್ಳಿ ಕೆರೆ ಆವರಣ ವಾಕಿಂಗ್ ಅಥವಾ ಜಾಗಿಂಗ್ ಮಾಡಲು ಬರುವವರಿಂದ ಕಿಕ್ಕಿರಿದುಹೋಗಿತ್ತು. ಸಾಮಾನ್ಯವಾಗಿ ಕುಕ್ಕರಹಳ್ಳಿ ಕೆರೆಯ ಸುತ್ತ ನಡೆಯುವವರು ತಮ್ಮ ಹೆಜ್ಜೆಗಳ ವೇಗದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಎಷ್ಟು ಸುತ್ತು ಹೊಡೆದೆವು, ಎಷ್ಟು ಕ್ಯಾಲೊರಿ ಕರಗಿತು, ಎಷ್ಟು ನಿಮಿಷದಲ್ಲಿ ಮುಗಿಸಿದೆವು ಎಂಬ ಲೆಕ್ಕಾಚಾರದಲ್ಲಿ ಕಣ್ಣುಗಳು ನೆಲದತ್ತವೇ ಇರುತ್ತವೆ. ಆದರೆ ಈ ಭಾನುವಾರ ಮಾತ್ರ ವಿಭಿನ್ನವಾಗಿತ್ತು.
ಸುಮಾರು ನಲವತ್ತು ಜನರ ಗುಂಪೊಂದು ಕುಕ್ಕರಹಳ್ಳಿ ಕೆರೆಯ ಸುತ್ತ ನಡೆದದ್ದು ವಾಕಿಂಗ್ಗಾಗಿ ಅಲ್ಲ, ಪ್ರಕೃತಿಯನ್ನು ಅರಿಯುವುದಕ್ಕಾಗಿ. ಹೆಜ್ಜೆಗಳು ನಿಧಾನವಾಗಿದ್ದವು, ಆದರೆ ಮನಸ್ಸು ಮತ್ತು ಕಣ್ಣುಗಳು ಎಚ್ಚರವಾಗಿದ್ದವು. 95 ವರ್ಷದ ಹೆಚ್.ಆರ್. ಬಾಪು ಸತ್ಯನಾರಾಯಣನವರಿಂದ ಹಿಡಿದು ನಾಲ್ಕು ವರ್ಷದ ಮಕ್ಕಳವರೆಗೆ ಎಲ್ಲ ವಯೋಮಾನದವರು ಈ ನಡಿಗೆಯಲ್ಲಿ ಭಾಗವಹಿಸಿದ್ದರು. ಇದು ಕೇವಲ ಒಂದು ವಾಕ್ ಆಗಿರಲಿಲ್ಲ, ತಲೆಮಾರುಗಳನ್ನು, ಪ್ರಕೃತಿಯನ್ನು ಮತ್ತು ಇತಿಹಾಸವನ್ನು ಜೋಡಿಸುವ ನಡಿಗೆಯಾಗಿತ್ತು .
‘ಪರಿಸರ ಹಬ್ಬದ’ ಅಂಗವಾಗಿ ಆಯೋಜಿಸಲಾದ ಈ ವಿಶೇಷ ಕೆರೆ ನಡಿಗೆಯು, ಪ್ರಕೃತಿಯನ್ನು ಕೇವಲ ನೋಡುವುದಕ್ಕಲ್ಲ, ಅದನ್ನು ಅರ್ಥಮಾಡಿಕೊಳ್ಳುವ ಅಪರೂಪದ ಅವಕಾಶವಾಗಿತ್ತು. ವಾರದ ದಿನಗಳಲ್ಲಿಯೂ ಹಾಗೂ ವಾರಾಂತ್ಯಗಳಲ್ಲಿಯೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪರಿಸರ ಹಬ್ಬದ ಭಾಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಯು.ಎನ್. ರವಿಕುಮಾರ್ ಅವರು ಎಲ್ಲರನ್ನು ಕುಕ್ಕರಹಳ್ಳಿ ಕೆರೆಯ ಸುತ್ತ ಕರೆದುಕೊಂಡು ಹೋಗಿ, ಅಲ್ಲಿನ ಮರಗಳು, ಪಕ್ಷಿಗಳು, ನೀರಿನ ಹರಿವಿನ ವ್ಯವಸ್ಥೆ, ಜೈವಿಕ ವೈವಿಧ್ಯತೆ ಹಾಗೂ ಮೈಸೂರಿನ ಪರಿಸರ ಮತ್ತು ಇತಿಹಾಸದೊಂದಿಗೆ ಕೆರೆಯು ಹೊಂದಿರುವ ಅವಿನಾಭಾವ ಸಂಬಂಧದ ಕುರಿತು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡರು. ಅವರ ವಿವರಣೆಗಳು ನಡಿಗೆಯನ್ನು ಪ್ರಕೃತಿಯೊಂದಿಗೆ ನಡೆಸಿದ ಅರ್ಥಪೂರ್ಣ ಸಂವಾದವಾಗಿ ಪರಿವರ್ತಿಸಿತು.
ನಡಿಗೆಯುದ್ದಕ್ಕೂ ಮರಗಳನ್ನು ನೋಡುತ್ತಾ, ಅವುಗಳ ಕಥೆಗಳನ್ನು ಕೇಳುತ್ತಾ, ಪಕ್ಷಿಗಳ ಕೂಗುಗಳನ್ನು ಆಲಿಸುತ್ತಾ ಎಲ್ಲರೂ ಸಾಗಿದರು . ಕೆರೆಯ ದಡದಲ್ಲಿ ನಿಂತು ದೂರದ ನೀರನ್ನು ನೋಡುತ್ತಿದ್ದಾಗ ಹೆಜ್ಜಾರ್ಲೆ (ಪೆಲಿಕಾನ್) ಹಾರಿಬರುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು. ಸ್ವಲ್ಪ ದೂರದಲ್ಲಿ ಬೂದು ಬಕ (ಗ್ರೇಟ್ ಹೆರಾನ್ ), ಕೊಳದ ಬಕ, ಉಂಡುಕೋಳಿ, ದೊಡ್ಡ ನೀರುಕಾಗೆ ಮತ್ತು ಸಣ್ಣ ನೀರುಕಾಗೆಗಳು ತಮ್ಮದೇ ಲೋಕದಲ್ಲಿ ಮಗ್ನವಾಗಿದ್ದವು. ಆಕಾಶದಲ್ಲಿ ಕೃಷ್ಣ ಹದ್ದು ಹಾರಾಡುತ್ತಿದ್ದರೆ, ಮರದ ಮೇಲ್ಭಾಗದಲ್ಲಿ ಬೂದು ಮಂಗಟ್ಟೆ ಕಾಣಿಸಿಕೊಂಡಿತು. ಹೀಗೆ ಒಂದೊಂದೇ ಪಕ್ಷಿಯನ್ನು ಗುರುತಿಸುತ್ತಾ ಹೋದಾಗ ಒಟ್ಟು 35 ಜಾತಿಯ ಪಕ್ಷಿಗಳನ್ನು ಗುರುತಿಸಲಾಯಿತು. ಪ್ರತಿಯೊಂದು ಪಕ್ಷಿಯೂ ತನ್ನದೇ ಆದ ಕಥೆಯನ್ನು ಹೊತ್ತಿತ್ತು. ಅವುಗಳಲ್ಲಿ ಮಂಗಟ್ಟೆ (Horn Bill) ಪಕ್ಷಿಯ ಬಗ್ಗೆ ಕೇಳಿದ ಒಂದು ಸಂಗತಿ ಎಲ್ಲರ ಮನಸೆಳೆಯಿತು. ತನ್ನ ಸಂಗಾತಿಗೆ ಜೀವಿತಾವಧಿಯ ನಿಷ್ಠೆಯನ್ನು ಕಾಯ್ದುಕೊಳ್ಳುವ ಈ ಪಕ್ಷಿ, ಮನುಷ್ಯರಿಗೆ ಸಂಬಂಧಗಳ ಮೌಲ್ಯವನ್ನು ನೆನಪಿಸಿತು.
ನಡಿಗೆಯುದ್ದಕ್ಕೂ ಮರಗಳ ಕಥೆಗಳೂ ಅನಾವರಣಗೊಂಡವು. ತಾರೆಮರ, ಆಲದಮರ, ನಾಗಲಿಂಗ ಪುಷ್ಪ, ಅರಳಿ, ನೇರಳೆ, ಈಚಲು, ಶ್ರೀಗಂಧ, ಹಲಸು, ಹೊಂಗೆ ಹಾಗೂ ಬುಗರಿ ಮರಗಳು ಕೇವಲ ಹಸಿರು ಹೊದಿಕೆಯಾಗಿರದೆ ಕೆರೆಯ ಆರೋಗ್ಯ ಕಾಪಾಡುವ ಜೀವಂತ ಕಾವಲುಗಾರರಾಗಿವೆ ಎಂಬುದನ್ನು ತಿಳಿದುಕೊಂಡೆವು. ಅದರಲ್ಲೂ ಕೆರೆಯ ಅಂಚಿನಲ್ಲಿ ಬೆಳೆದಿರುವ ಈಚಲು, ನೇರಳೆ ಮತ್ತು ಆಲದ ಮರಗಳು ತಮ್ಮ ಬೇರುಗಳ ಮೂಲಕ ಮಣ್ಣನ್ನು ಹಿಡಿದಿಟ್ಟುಕೊಂಡು ನೀರನ್ನು ಸಂರಕ್ಷಿಸುತ್ತವೆ. ನೇರಳೆ ಮರಗಳು ನೀರಿನ ಗುಣಮಟ್ಟ ಸುಧಾರಿಸಲು ಸಹಕಾರಿಯಾಗುತ್ತವೆ. ಹೀಗಾಗಿ ಈ ಮರಗಳು ಕೆರೆಯ ಆರೋಗ್ಯವನ್ನು ಕಾಪಾಡುವ ಪ್ರಕೃತಿಯ ವೈದ್ಯರಂತಿವೆ.
ಈ ನಡಿಗೆಯಲ್ಲಿ ತಾರೆಮರದ ಕಥೆಯೂ ಕೇಳಿಬಂತು. ಈ ಮರ ಇಂದು ಉಳಿದುಕೊಂಡಿರುವುದಕ್ಕೆ ಕಾರಣ ಅದರ ಸುತ್ತ ಬೆಳೆದಿರುವ ನಂಬಿಕೆ. ನಮ್ಮ ಪುರಾಣಗಳಲ್ಲಿ ಶನಿದೇವರೊಂದಿಗೆ ಈ ಮರದ ಸಂಬಂಧವನ್ನು ಬೆಸೆಯುವುದರಿಂದ ಜನರು ಅದನ್ನು ಕಡಿದು ಹಾಕಲು ಹೆದರುತ್ತಾರೆ. ಕೆಲವೊಮ್ಮೆ ವಿಜ್ಞಾನ ಉಳಿಸದಿದ್ದನ್ನು ಸಂಸ್ಕೃತಿ ಉಳಿಸುತ್ತದೆ ಎಂಬುದಕ್ಕೆ ಇದು ಜೀವಂತ ಉದಾಹರಣೆ.
ಆದರೆ ಈ ಸುಂದರ ಪರಿಸರದ ಮಧ್ಯೆಯೇ ಕೆಲವು ಆತಂಕಗಳೂ ಕೇಳಿಬಂದವು. ಸುಬಾಬುಲ್ ಮತ್ತು ರಕ್ತಬೀಜಾಸುರ (ಸೆನ್ನಾ ಸೆಪ್ಟಾಬುಲಸ್) ಮರಗಳು ಸ್ಥಳೀಯ ಜಾತಿಯ ಸಸ್ಯಗಳಿಗೆ ಅಪಾಯಕಾರಿಯಾಗಿವೆ. ಅವುಗಳ ಬೀಜಗಳು ಎಲ್ಲೆಲ್ಲಿ ಬೀಳುತ್ತವೆಯೋ ಅಲ್ಲೆಲ್ಲಾ ವೇಗವಾಗಿ ಬೆಳೆಯುತ್ತವೆ. ಅವುಗಳ ನೆರಳಿನಲ್ಲಿ ಹುಲ್ಲು ಸಹ ಬೆಳೆಯದ ಸ್ಥಿತಿ ಉಂಟಾಗುತ್ತದೆ. ಹೀಗಾಗಿ ಸ್ಥಳೀಯ ಜಾತಿಯ ಮರಗಳು ಬೆಳೆಯಲು ಅವಕಾಶ ಸಿಗುವುದಿಲ್ಲ. ಪರಿಸರ ಸಮತೋಲನಕ್ಕೆ ಇಂತಹ ಆಕ್ರಮಣಕಾರಿ ಜಾತಿಗಳು ದೊಡ್ಡ ಸವಾಲು ಎಂಬುದು ಅರಿವಾಯಿತು.
ಇನ್ನೊಂದು ಕಳವಳದ ಸಂಗತಿ ಕೆರೆಯ ನೀರಿನ ಗುಣಮಟ್ಟ. ಪಡುವಾರಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದುಬರುವ ಕೊಳಚೆ ನೀರು ಕೆರೆಯನ್ನು ಸೇರುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಮೀನುಗಳು ಮತ್ತು ಪಕ್ಷಿಗಳ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ಜೀವಜಗತ್ತಿಗೆ ಆಶ್ರಯವಾಗಬೇಕಾದ ಕೆರೆ ನಿಧಾನವಾಗಿ ಸಂಕಷ್ಟದತ್ತ ಸಾಗುತ್ತಿರುವ ಚಿತ್ರಣ ಮನಸ್ಸನ್ನು ಭಾರವಾಗಿಸಿತು.
ಕೆರೆಯ ಮಧ್ಯದಲ್ಲಿರುವ ದ್ವೀಪದತ್ತ ಗಮನ ಹರಿಸಿದಾಗ ಮತ್ತೊಂದು ಚಿಂತೆ ಎದುರಾಯಿತು. ಹಲವು ವರ್ಷಗಳಿಂದ ಪಕ್ಷಿಗಳ ಸುರಕ್ಷಿತ ಗೂಡುಕಟ್ಟುವ ತಾಣವಾಗಿರುವ ಆ ದ್ವೀಪ ನಿಧಾನವಾಗಿ ಮುಳುಗುತ್ತಿದೆ. ಸುಮಾರು ಆರೇಳು ಜಾತಿಯ ಪಕ್ಷಿಗಳು ಅಲ್ಲಿ ಗೂಡುಕಟ್ಟಿ ಮರಿಗಳನ್ನು ಬೆಳೆಸುತ್ತಿವೆ. ಆ ದ್ವೀಪ ಕೇವಲ ಮಣ್ಣಿನ ತುಂಡಲ್ಲ; ಅದು ಸಾವಿರಾರು ಪಕ್ಷಿಗಳ ಭವಿಷ್ಯದ ಮನೆ. ಅದನ್ನು ಜವಾಬ್ದಾರಿಯುತವಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂಬ ಸಂದೇಶವನ್ನು ಈ ನಡಿಗೆ ಸ್ಪಷ್ಟವಾಗಿ ನೀಡಿತು.
ನಗರದ ಮಧ್ಯದಲ್ಲಿರುವ ಒಂದು ಕೆರೆ ಇಷ್ಟೊಂದು ವೈವಿಧ್ಯಮಯ ಪಕ್ಷಿಸಂಕುಲಕ್ಕೆ ಆಶ್ರಯವಾಗಿರುವುದು ಆಶ್ಚರ್ಯ ಹುಟ್ಟಿಸಿತು. ಬೆಳಿಗ್ಗೆ 7.30ಕ್ಕೆ ಆರಂಭವಾದ ಈ ಪ್ರಕೃತಿ ಪಯಣ 9 ಗಂಟೆಗೆ ಮುಕ್ತಾಯವಾಯಿತು. ಕುಕ್ಕರಹಳ್ಳಿ ಕೆರೆ ಕೇವಲ ನೀರಿನ ತೊಟ್ಟಿಯಲ್ಲ, ಅದು ನೂರಾರು ಜೀವಿಗಳಿಗೆ ಆಶ್ರಯ. ಪಕ್ಷಿಗಳಿಗೆ ಮನೆ, ಮರಗಳಿಗೆ ಜೀವನಾಡಿ, ಮೈಸೂರಿನ ಉಸಿರು. ನಗರದ ಮಧ್ಯದಲ್ಲೇ ಇಂತಹ ಒಂದು ಜೀವಂತ ಜಲಾಶಯ ಇರುವುದು ಎಷ್ಟು ದೊಡ್ಡ ಭಾಗ್ಯ ಎಂಬುದು ಆ ಕ್ಷಣಗಳಲ್ಲಿ ಮನದಟ್ಟಾಯಿತು.
ನಾವು ಪ್ರತಿದಿನ ಇದೇ ಕೆರೆಯ ಸುತ್ತ ನಡೆಯುತ್ತೇವೆ. ಆದರೆ ನಿಜವಾಗಿಯೂ ಎಷ್ಟು ಬಾರಿ ಈ ಕೆರೆಯನ್ನು ನೋಡಿದ್ದೇವೆ? ಮರಗಳ ನೆರಳನ್ನು ಅನುಭವಿಸಿದ್ದೇವೆ? ಪಕ್ಷಿಗಳ ಹಾಡನ್ನು ಕೇಳಿದ್ದೇವೆ? ನೀರಿನ ಹರಿವನ್ನು ಗಮನಿಸಿದ್ದೇವೆ? ಅಥವಾ ನಮ್ಮ ನಗರವನ್ನು ಇಷ್ಟು ಸುಂದರವಾಗಿ ರೂಪಿಸಿದವರ ದೂರದೃಷ್ಟಿಯನ್ನು ನೆನಸಿದ್ದೇವೆ?
ಈ ದಿನದ ನಿಧಾನ ಹೆಜ್ಜೆಗಳು ನಮಗೆ ಒಂದು ಮಹತ್ವದ ಪಾಠವನ್ನು ಕಲಿಸಿಕೊಟ್ಟವು. ಜೀವನದಲ್ಲಿ ಕೆಲವೊಮ್ಮೆ ವೇಗವನ್ನು ಕಡಿಮೆ ಮಾಡಬೇಕು. ಏಕೆಂದರೆ ನಿಧಾನವಾಗಿ ನಡೆದಾಗ ಮಾತ್ರ ಸುತ್ತಲಿನ ಸೌಂದರ್ಯ ಕಾಣಿಸುತ್ತದೆ.
ಕುಕ್ಕರಹಳ್ಳಿ ಕೆರೆಯ ಇಂದಿನ ಬೆಳಗ್ಗೆ ಕೇವಲ ಒಂದು ಬೆಳಗಿನ ನದಿಗೆ ಮಾತ್ರ ಆಗಿರಲಿಲ್ಲ, ಅದು ಪ್ರಕೃತಿಯೊಂದಿಗೆ ನಡೆಸಿದ ಸಂಭಾಷಣೆ. ಮೈಸೂರಿನ ಇತಿಹಾಸದೊಂದಿಗೆ ಮಾಡಿಕೊಂಡ ಮರುಪರಿಚಯ. ಮತ್ತು ನಾವು ಎಷ್ಟು ಭಾಗ್ಯವಂತರು ಎಂಬುದನ್ನು ಮನದಟ್ಟು ಮಾಡಿದ ಒಂದು ಸುಂದರ ಅನುಭವ.

